ಜೀವವಿದ್ಯುತ್ ಪ್ರತಿರೂಪ -
ಜೀವಂತ ಅಂಗಗಳಲ್ಲಿ ವಿದ್ಯುತ್ ಪ್ರವಾಹ ಹೇಗೆ ಉತ್ಪತ್ತಿಯಾಗುತ್ತದೆ ಎನ್ನುವುದನ್ನು ವಿಶದೀಕರಿಸುವ ಸಲಕರಣೆ (ಬಯೊ ಎಲೆಕ್ಟ್ರಿಕ್ ಮಾಡೆಲ್). ಜೀವಂತ ಅಂಗಗಳಲ್ಲಿರುವ ವಿದ್ಯುದಾವಿಷ್ಟ್ರ ಕಣಗಳ ಹಾಗೂ ಧನ ಮತ್ತು ಋಣ ಅಯಾನುಗಳ ಚಲನದಿಂದ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಎಲ್ಲ ಅಂಗಗಳ ಒಳಗೂ ಹೊರಗೂ ಅನೇಕ ಆವಿಷ್ಟ ಕಣಗಳು ಕರಗಿರುವ ದ್ರಾವಣವಿರುವುದು ಅವುಗಳ ಜೀವಂತ ಸ್ಥಿತಿಯ ಸಾಮಾನ್ಯ ಲಕ್ಷಣ. ಆದರೆ ಎಲ್ಲ ಅಂಗಗಳಲ್ಲೂ ಆವಿಷ್ಟ ಕಣಗಳು ಅಗತ್ಯ ಸಂಖ್ಯೆಯಲ್ಲಿ ಅಗತ್ಯ ರೀತಿಯಲ್ಲಿ ಒಳಗಿನಿಂದ ಹೊರಬರುವುದೂ ಹೊರಗಿನಿಂದ ಒಳಹೋಗುವುದೂ ಕಾಣಬರುವುದಿಲ್ಲ. ಆದ್ದರಿಂದ ಇವುಗಳಲ್ಲಿ ವಿದ್ಯುತ್ ಪ್ರವಾಹ ಉಂಟಾಗುವುದಿಲ್ಲ. ಉಂಟಾದರೂ ಅದು ಗಣನೀಯವಾಗಿರುವುದಿಲ್ಲ. ಪ್ರಚೋದನೆಗೆ ಶೀಘ್ರವಾಗಿ ಹಾಗೂ ಸ್ಫುಟವಾಗಿ ಅನುಕ್ರಿಯೆ ತೋರಬಲ್ಲ ನರ, ಸ್ನಾಯು, ಗ್ರಂಥಿ ಮುಂತಾದ ಅಂಗ ಅಂಗಾಂಶಗಳಲ್ಲಿ ಧನ ಅಯಾನುಗಳ ಅಗತ್ಯರೀತಿಯ ಚಲನವನ್ನು ನೋಡಬಹುದು. ಇದು ಕೂಡ ಈ ಅಂಗ ಅಂಗಾಂಶಗಳು ಪ್ರಚೋದನೆಗೆ ಒಳಗಾಗಿ ತಮ್ಮ ವಿಶಿಷ್ಟ ಅನುಕ್ರಿಯೆಯನ್ನು ತೋರುವಾಗ ಮಾತ್ರ. ಈ ಸಮಯದಲ್ಲಿ ಅವುಗಳಲ್ಲಿ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ನರ, ಸ್ನಾಯು ಮತ್ತು ಗ್ರಂಥಿಗಳು ಏನೂ ಚಟುವಟಿಕೆ ತೋರದೆ ಸ್ವಸ್ಥವಾಗಿರುವಾಗ ಅವುಗಳಲ್ಲಿ ವಿದ್ಯುತ್ಪ್ರವಾಹವಿರುವುದಿಲ್ಲ. ಕಾರಣ ಸ್ವಸ್ಥಸ್ಥಿತಿಯಲ್ಲಿ ಆವಿಷ್ಟ ಕಣಗಳ ಚಲನೆ ಸ್ಥಗಿತವಾಗಿರುವುದು.

ಜೀವಾಣುಗಳ ಒಳ ಮತ್ತು ಹೊರ ದ್ರಾವಣಗಳಲ್ಲಿ ಬೇರೆ ಬೇರೆ ಆವಿಷ್ಟ ಕಣಗಳಿವೆ. ದ್ರಾವಣಗಳಲ್ಲಿ ಕರಗಿರುವ ವಸ್ತುಗಳು ಇವೆರಡು ದ್ರಾವಣಗಳನ್ನೂ ವಿಭಾಗಿಸುವ ಜೀವಾಣುವಿನ ಭಿತ್ತಿಯಲ್ಲಿ ಅಡೆತಡೆ ಇಲ್ಲದೆ ತೂರಲಾರವು. ಆದರೆ ಹಾಗೆ ತೂರಿ ಒಳಗೂ ಹೊರಗೂ ಸಮ ಪ್ರಮಾಣದಲ್ಲಿ ವ್ಯಾಪಿಸುವ ನೈಸರ್ಗಿಕ ಪ್ರವೃತ್ತಿ ಇದ್ದೇ ಇರುತ್ತದೆ. ಜೀವಾಣುವಿನ ಒಳದ್ರಾವಣದಲ್ಲಿ ಕರಗಿರುವ ವಸ್ತು ಮುಖ್ಯವಾಗಿ ಪೊಟ್ಯಾಸಿಯಮ್ ಪ್ರೋಟೀನೇಟ್. ಇದು ವಿಭಜಿಸಿ ಪೊಟ್ಯಾಸಿಯಮ್ ಧನ ಅಯಾನುಗಳಾಗಿಯೂ ಪ್ರೋಟಿನ್ ಋಣ ಅಯಾನುಗಳಾಗಿಯೂ ಇರುತ್ತವೆ. ಜೀವಾಣುವಿನ ಹೊರದ್ರಾವಣದಲ್ಲಿ ಕರಗಿರುವ ಮುಖ್ಯ ವಸ್ತು ಸೋಡಿಯಮ್ ಕ್ಲೋರೈಡ್. ಇದು ಕೂಡ ಧನ ಅಯಾನ್ ಸೋಡಿಯಮ್ ಮತ್ತು ಋಣ ಅಯಾನ್ ಕ್ಲೋರೈಡ್ ಆಗಿ ವಿಭಜನೆಗೊಂಡಿರುತ್ತದೆಂಬುದು ನಿರೀಕ್ಷಿತ. ಜೀವಾಣುವಿನೊಳಗಿರುವ ಪ್ರೋಟೀನ್ ಕಣಗಳು ತಮ್ಮ ಬಹುಗಾತ್ರತೆಯಿಂದ ಜೀವಾಣು ಭಿತ್ತಿಯನ್ನು ತೂರಲಾರವು. ಸೋಡಿಯಮ್ ಅಯಾನುಗಳು ಜೀವಾಣುವಿನೊಳಹುಗಲು ಏನೋ ಅವ್ಯಕ್ತ ಪ್ರತಿಬಂಧಕ ಉಂಟು. ಆದ್ದರಿಂದ ಕ್ಲೋರೈಡ್ ಒಳಹೋಗುವಂತೆಯೂ ಇಲ್ಲ ಹಾಗೆಯೇ ಪೊಟ್ಯಾಸಿಯಮ್ ಹೊರಬರುವಂತೆಯೂ ಇಲ್ಲ. ಒಟ್ಟಿನಲ್ಲಿ ಜೀವಾಣುವಿನ ಭಿತ್ತಿಯನ್ನು ತೂರಿ ಸೋಡಿಯಮ್ ಮತ್ತು ಕ್ಲೋರೈಡುಗಳು ಒಳಹೊಕ್ಕು ಪೊಟ್ಯಾಸಿಯಮ್ ಹಾಗೂ ಪ್ರೋಟೀನ್ ಅಯಾನುಗಳು ಹೊರಬಂದು ಒಳಹೊರಗೆ ಸಮಪ್ರಮಾಣದಲ್ಲಿ ವ್ಯಾಪಿಸುವ ನೈಸರ್ಗಿಕ ಪ್ರಯತ್ನ ವಿಫಲವಾಗುತ್ತದೆ.

ಆದರೆ ಈ ಪ್ರವೃತ್ತಿಯ ಒತ್ತಾಯದಂತೆ ಒಳಹುಗಲು ಸೋಡಿಯಮ್ ಅಯಾನುಗಳು ಸಾಲುಸಾಲಾಗಿ ಸಜ್ಜಾಗಿ ಜೀವಾಣುವಿನ ಭಿತ್ತಿಯ ಹೊರಗೆ ಶೇಖರಗೊಳ್ಳುವುದರಿಂದ ಅಲ್ಲಿ ಧನವಿದ್ಯುತ್ ವಿಭವ (ಪೊಟೆನ್ಶಿಯಲ್) ಉಂಟಾಗುತ್ತದೆ. ಈ ಸೋಡಿಯಮ್ ಅಯಾನುಗಳು ಜೀವಾಣುವಿನೊಳಗಿರುವ ಪ್ರೋಟೀನ್ ಅಯಾನುಗಳನ್ನು ಆಕರ್ಷಿಸಿ ಅವು ಕೂಡ ಒಳಗೆ ಸಾಲುಸಾಲಾಗಿ ವ್ಯೂಹಗೊಳ್ಳುವುದರಿಂದ ಅಲ್ಲಿ ಕಾಣಬರುವುದು ಋಣವಿದ್ಯುತ್ ವಿಭವ. ಇವೆರಡರ ನಡುವೆ ಸ್ವಾಭಾವಿಕವಾಗಿ ಏರ್ಪಡಬೇಕಾದ ವಿದ್ಯುತ್ ಪ್ರವಾಹ ಮಾತ್ರ ಉಂಟಾಗುವುದಿಲ್ಲ. ಜೀವಾಣುಭಿತ್ತಿ ಅಯಾನುಗಳ ಚಲನೆಗೆ ತಡೆಯಾಗಿ ಅದು ವಿದ್ಯುದ್ವಾಹಕ ಪ್ರತಿಬಂಧಕವಾಗಿ ವರ್ತಿಸುವುದು ಇದಕ್ಕೆ ಕಾರಣ. ಪ್ರಚೋದನೆಗೊಂಡಾಗ ಈ ಕ್ಷಣದಲ್ಲಿ ಮಾತ್ರ ಸೋಡಿಯಮ್ ಅಯಾನುಗಳಿಗೆ ಪ್ರತಿಬಂಧಕ ಸಡಿಲವಾಗಿ ಅವು ಅತಿಶೀಘ್ರವಾಗಿ ಮತ್ತು ಅಧಿಕ ಸಂಖ್ಯೆಯಲ್ಲಿ ಒಳಹೋಗುತ್ತವೆ. ಇದು ವಿದ್ಯುತ್ ಪ್ರವಾಹದ ಪ್ರಾರಂಭ. ಮರುಕ್ಷಣವೇ ಪೊಟ್ಯಾಸಿಯಮ್ ಅಯಾನುಗಳು ಅನುಗುಣಸಂಖ್ಯೆಯಲ್ಲಿ ಹೊರಬರುತ್ತವೆ. ಇದರಿಂದ ಹಿಮ್ಮೊಗವಾದ ವಿದ್ಯುತ್ ಪ್ರವಾಹ ಉಂಟಾಗಿ ಕ್ರಿಯಾಜನಿತ ವಿದ್ಯುತ್ ಪ್ರವಾಹದ (ಆ್ಯಕ್ಷನ್ ಕರೆಂಟ್) ಅಂತ್ಯವಾಗುತ್ತದೆ. ಮುಂದಿನದು ಪ್ರಚೋದನ ಪೂರ್ವಸ್ಥಿತಿ. ಅನುಕ್ರಿಯೆಯ ಸಮಯದಲ್ಲಿ ಕಾಣಬರುವ ವಿದ್ಯುತ್ ಪ್ರವಾಹಕ್ಕೆ ಮುಖ್ಯವಾದ ಕಾರಣಗಳು ಇವು. 

ಈ ವಿವರಗಳನ್ನು ವ್ಯಕ್ತಪಡಿಸಲು ಪಾರಗಮ್ಯತೆಯ (ಪರ್ಮಿಯೆಬಿಲಿಟಿ) ಮಿತಿಯಲ್ಲಿ ಜೀವಾಣುಭಿತ್ತಿಯನ್ನು ಹೋಲುವ ಒಂದು ತೆಳುಪೊರೆಯ ಚೀಲವನ್ನು ಮಾಡಿ ಅದರೊಳಗೆ ಪೊಟ್ಯಾಸಿಯಮ್ ಪ್ರೋಟೀನೇಟ್ ದ್ರಾವಣವನ್ನು ತುಂಬಿ ಆ ಚೀಲವನ್ನು ಸೋಡಿಯಮ್ ಕ್ಲೋರೈಡ್ ದ್ರಾವಣದಲ್ಲಿಟ್ಟು ಒಂದು ಪ್ರಾಯೋಗಿಕ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಕಲೊಡಿಯನ್ ಎಂಬ ರಾಸಾಯನಿಕವನ್ನು ಅಸಿಟೋನಿನಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಕರಗಿಸಿ ಆ ದ್ರಾವಣವನ್ನು ತೆಳುವಾಗಿ ಹರಡಿದರೆ ಅಸಿಟೋನ್ ಆವಿಯಾಗಿ ಇಚ್ಛಿಸಿದಷ್ಟು ಪಾರಗಮ್ಯತೆಯುಳ್ಳ ಪೊರೆ ಉಳಿದುಕೊಳ್ಳುತ್ತದೆ. ಇಂಥ ಪೊರೆಯನ್ನು ಬಳಸಿಕೊಂಡು ಜೀವಾಣುವಿನ ಸ್ವಸ್ಥಸ್ಥಿತಿಯಲ್ಲಿ ಒಳಗೆ ಋಣವಿದ್ಯುತ್ ವಿಭವ ಇರುವುದನ್ನೂ ಹೊರಗೆ ಧನವಿದ್ಯುತ್ ವಿಭವ ಇರುವುದನ್ನೂ ಹೋಲುವಂಥ ಸ್ಥಿತಿಯನ್ನುಳ್ಳ ಪ್ರತಿರೂಪವನ್ನು ಪಡೆಯಬಹುದು. ಪ್ರಾಯೋಗಿಕವಾಗಿ ಹೊರಗಿನ ಸೋಡಿಯಮ್ ಕಣ ಒಳಹೋಗುವಂತೆ ಮಾಡಿದರೆ ವಿದ್ಯುತ್ ಪ್ರವಾಹ ಉಂಟಾಗುವುದನ್ನು ಈ ಪ್ರತಿರೂಪದಲ್ಲಿ ತೋರಿಸಲಾಗಿದೆ.

ಪ್ರತಿಕ್ರಿಯೆಯ ವೇಳೆಯಲ್ಲಿ ವಿದ್ಯುತ್ ಪ್ರವಾಹ ಮೇಲೆ ಹೇಳಿದ ಕಾರಣದಿಂದಲೇ ಅಲ್ಲದೆ ಬೇರೆ ಕಾರಣದಿಂದಲೂ ಉಂಟಾಗಬಹುದು ಎಂದು ಇನ್ನೊಂದು ಪ್ರತಿರೂಪವನ್ನು ಬಳಸಿ ತೋರಿಸಿದ್ದಾರೆ. ಕೆಲವು ವಿಜ್ಞಾನಿಗಳ ಪ್ರಕಾರ ಜೀವಾಣುಭಿತ್ತಿ ಭಾಗಶಃ ಲಿಪಿಡಿನ ಅಂಶದಿಂದ ಆಗಿರುವುದು ಜೀವವಿದ್ಯುತ್ತಿನ (ಬಯೋ ಎಲೆಕ್ಟ್ರಿಸಿಟಿ) ಉತ್ಪತ್ತಿಗೂ ಪ್ರವಾಹಕ್ಕೂ ಕಾರಣ. ಭಿತ್ತಿಯ ಲಿಪಿಡಿನ ಅಣುಗಳು ಭಿತ್ತಿಯ ಒಳಮೈಮೇಲೆ ಕ್ಷಣಿಕವಾಗಿ ಉತ್ಕರ್ಷಗೊಂಡು ಹೊರಮೈ ಅಪಕರ್ಷಣ ಸ್ಥಿತಿಯಲ್ಲಿ ಇರುವುದರಿಂದ ಇವೆರಡು ಮೈಗಳ ನಡುವೆ ವಿದ್ಯುತ್ ಪ್ರವಾಹ ಏರ್ಪಡುತ್ತದೆ. ಪ್ರಚೋದನೆಯ ವೇಳೆಯಲ್ಲಿ ಈ ರೀತಿ ಆಗುವುದರಿಂದ ಆಗ ಮಾತ್ರ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಸ್ವಸ್ಥಸ್ಥಿತಿಯಲ್ಲಲ್ಲ ಎಂಬುದಾಗಿ ಇವರು ವಿವರಿಸಿದ್ದಾರೆ. ಉತ್ಕರ್ಷಣೆ ಅಪಕರ್ಷಣೆಗಳು ನರ ಪ್ರಚೋದನೆ ಮುಂದುವರಿಯುವ ರೀತಿಯಲ್ಲಿಯೇ ಮುಂದಕ್ಕೆ ಒಯ್ಯಲ್ಪಡುತ್ತವೆ. ನರಪ್ರಚೋದನೆಯಲ್ಲಿ ಜೀವವಿದ್ಯುತ್ ಪ್ರವಾಹ ಉಂಟಾಗುತ್ತದೆ. ಉತ್ಕರ್ಷಣ ಅಪಕರ್ಷಣ ಸ್ಥಳಗಳ ನಡುವೆಯೂ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಆದ್ದರಿಂದ ನರಪ್ರಚೋದನೆ ಉತ್ಕರ್ಷಣೆ ಅಪಕರ್ಷಣೆಗಳಿಂದಾದ ಪರಿಣಾಮವೇ. ಅದೇ ಕಾರಣದಿಂದ ಕ್ರಿಯಾಜನಿತವಿದ್ಯುತ್ ಪ್ರವಾಹವೂ ಎಂದು ಇವರ ವಾದ.

1.2ಕ್ಕಿಂತ ಹೆಚ್ಚು ಸಾಂದ್ರತೆಯ ಸಾರ ನೈಟ್ರಿಕ್ ಆಮ್ಲದಲ್ಲಿ ಒಂದು ಕಬ್ಬಿಣದ ತಂತಿಯನ್ನು ಇಟ್ಟಾಗ ಉಂಟಾಗುವ ರಾಸಾಯನಿಕ ಪ್ರತಿಕ್ರಿಯೆ ಕೇವಲ ಕ್ಷಣಿಕ. ಅನಂತರ ಸ್ವಸ್ಥಸ್ಥಿತಿ (ಪ್ಯಾಸಿವ್ ಕಂಡಿಷನ್) ಏರ್ಪಡುತ್ತದೆ. ಈ ಸ್ವಸ್ಥಸ್ಥಿತಿಗೆ ಕಾರಣ ಕಬ್ಬಿಣದ ತಂತಿಯ ಮೇಲ್ಮೈ ಉತ್ಕರ್ಷಿಸಲ್ಪಟ್ಟು ಕಬ್ಬಿಣ ಆಕ್ಸೈಡ್ ಪದರವಾಗಿ ಅದು ಒಳಗಿನ ಕಬ್ಬಿಣವನ್ನು ಆಮ್ಲ ಕರಗಿಸದಂತೆ ರಕ್ಷಿಸುವುದು. ಸ್ವಸ್ಥಸ್ಥಿತಿಯಲ್ಲಿ ತಂತಿಯ ಮೇಲ್ಮೈಯನ್ನು ಒಂದು ಸ್ಥಳದಲ್ಲಿ ಕರೆದು ಇಲ್ಲವೆ ರಾಸಾಯನಿಕಗಳಿಂದಲೋ ವಿದ್ಯುತ್ತಿನಿಂದಲೋ ಉದ್ರೇಕಿಸಿದರೆ ಒಳಗಿನ ಕಬ್ಬಿಣ ಆ ಸ್ಥಳದಲ್ಲಿ ಬಹಿರಂಗಿಸಲ್ಪಡುತ್ತದೆ. ಕಬ್ಬಿಣ ಆಮ್ಲಗಳ ಸಂಪರ್ಕದಿಂದ ಪುನಃ ಕ್ಷಣಿಕವಾಗಿ ರಾಸಾಯನ ಪ್ರತಿಕ್ರಿಯೆ ಉಂಟಾಗಿ ಆ ಸ್ಥಳ ಮೊದಲಿನಂತಾಗುತ್ತದೆ ಇಷ್ಟೇ ಅಲ್ಲ. ಅದರ ಮುಂದಿನ ಸ್ಥಳದಲ್ಲಿ ಕಬ್ಬಿಣ ಆಕ್ಸೈಡ್ ಪದರ ಕರಗಿ ಅಲ್ಲಿ ಕಬ್ಬಿಣ ಆಮ್ಲಕ್ಕೆ ಒಡ್ಡಲ್ಪಟ್ಟು ಕ್ಷಣ ಮಾತ್ರದ ರಾಸಾಯನಿಕಕ್ರಿಯೆ ಜರುಗಿ ಮುಂದಿನ ಸ್ಥಳದಲ್ಲಿ ಇಂಥದೇ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ನರವನ್ನು ಒಂದು ಸ್ಥಳದಲ್ಲಿ ಪ್ರಚೋದಿಸಿದರೆ ಆ ನರದಲ್ಲಿ ಪ್ರತಿಕ್ರಿಯೆ ಮುಂದುವರಿಯುವ ರೀತಿಯಲ್ಲಿ ಇದು ಇದೆಯೆಂಬುದು ಸ್ಪಷ್ಟ. ಪ್ರಚೋದಿಸಿದಾಗ ಜನಿಸುವ ವಿದ್ಯುತ್ ಪ್ರವಾಹವೇ ಆ ಜೀವಾಣುವಿನ ವಿಶಿಷ್ಟ ಪ್ರತಿಕ್ರಿಯೆಯನ್ನು ಆಗಗೊಳಿಸುತ್ತದೆ ಎಂದು ಇವರು ವಿವರಿಸಿದ್ದಾರೆ. ಗುಂಡಿಗೆಯ ನಿರಂತರ ಮಿಡಿತಕ್ಕೆ ನಿರಂತರವಾಗಿ ಇಂಥ ವಿದ್ಯುತ್ ಪ್ರವಾಹ ಒದಗಬೇಕೆಂದೂ ಆದ್ದರಿಂದ ಗುಂಡಿಗೆಯಲ್ಲಿ ಶೀಘ್ರ ಉತ್ಕರ್ಷಣ ಅಪಕರ್ಷಣಗಳಿಗೆ ಯೋಗ್ಯ ಲಿಪಿಡ್ ನಿರಂತರವಾಗಿ ಒದಗಬೇಕೆಂದೂ ಇಂಥ ಲಿಪಿಡ್ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಕಂಡುಬರುವ ನವೀನರೀತಿಯ ಆಹಾರಗಳ ಸೇವನೆಯಿಂದ ದೊರಕದೆಂದೂ ಅದಕ್ಕೇ ಅಲ್ಲಿ ಗುಂಡಿಗೆ ರೋಗಗಳಿಗೆ ತುತ್ತಾಗುವವರು ಬಹಳವೆಂದೂ ಈ ವಿಜ್ಞಾನಿಗಳು ತಮ್ಮ ವಾದವನ್ನು ಲಂಬಿಸಿದ್ದಾರೆ. ಜೀವವಿದ್ಯುತ್ ಪ್ರತಿರೂಪಗಳಿಂದ ತಮ್ಮ ವಾದವನ್ನು ಮಂಡಿಸಿ ಅದನ್ನು ರುಜುವಾತುಪಡಿಸಲು ಪ್ರಯತ್ನಿಸಿದ್ದರೂ ಬಹುಶಃ ಜೀವವಿದ್ಯುತ್ ಪ್ರವಾಹ ಈ ಕಾರಣದಿಂದ ಉಂಟಾಗುವುದೂ ಇಲ್ಲ. ಅದೇ ವಿಶಿಷ್ಟ ಪ್ರತಿಕ್ರಿಯೆಗೆ ಕಾರಣವೂ ಅಲ್ಲವೆಂದು ತೋರುತ್ತದೆ. ಪ್ರಚೋದನೆಯ ಫಲಿತಾಂಶ ಪ್ರತಿಕ್ರಿಯೆ ಹಾಗೂ ಕ್ರಿಯಾಜನಿತ ವಿದ್ಯುತ್ ಪ್ರವಾಹ ಎರಡು ಎಂದು ಮಾತ್ರ ಹೇಳಬಹುದು ಅಷ್ಟೇ.
(ಎಸ್.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ